ನ್ಯೂ ಸೌತ್ ವೇಲ್ಸ್ - 
ಆಸ್ಟ್ರೇಲಿಯನ್ ಕಾಮನ್‍ವೆಲ್ಸ್‍ನ ಒಂದು ರಾಜ್ಯ. ಆಸ್ಟ್ರೇಲಿಯದ ಆಗ್ನೇಯ ಭಾಗದಲ್ಲಿದೆ. ದಕ್ಷಿಣದಲ್ಲಿ ವಿಕ್ಟೋರಿಯ ರಾಜ್ಯ, ಪಶ್ಚಿಮದಲ್ಲಿ ದಕ್ಷಿಣ ಆಸ್ಟ್ರೇಲಿಯ ರಾಜ್ಯ. ಉತ್ತರದಲ್ಲಿ ಕ್ವೀನ್ಸ್‍ಲೆಂಡ್ ರಾಜ್ಯ. ಪೂರ್ವದಲ್ಲಿ ಪೆಸಿಫಿಕ್ ಸಾಗರ ಇವೆ. ವಿಸ್ತೀರ್ಣ 8,01,428 ಚ.ಕಿಮೀ ಜನಸಂಖ್ಯೆ 47,02,484(1973) ಆಡಳಿತ ಕೇಂದ್ರ ಸಿಡ್ನಿ.

	ಭೌತಲಕ್ಷಣ : ರಾಜ್ಯದ ಪೂರ್ವತೀರದ ಗ್ರೇಟ್ ಡಿವೈಡಿಂಗ್ ರೇಂಜ್ ಎಂಬ ಬೆಟ್ಟ ಸಾಲು ಕಡಿದಾದ ಸಮುದ್ರದಂಚಿನ ಭೂಭಾಗವನ್ನು ಪಶ್ಚಿಮದ ಬಯಲಿನಿಂದ ಪ್ರತ್ಯೇಕಿಸಿದೆ. ಸಮುದ್ರದಂಚಿಗೂ ಬೆಟ್ಟದ ಸಾಲುಗಳಿಗೂ ನಡುವಣ ಭೂಪ್ರದೇಶ 16ಕಿಮೀ-80ಕಿಮೀ ಅಗಲವಾಗಿದೆ. ಬೆಟ್ಟ ಸಾಲುಗಳ ಪಶ್ಚಿಮಕ್ಕೆ ಭೂಮಿ ಕ್ರಮಕ್ರಮವಾಗಿ ಪಶ್ಚಿಮದ ಬಯಲಿಗೆ ಇಳಿಯುತ್ತದೆ. ಸಮುದ್ರ ಮಟ್ಟದಿಂದ ಈ ಗಿರಿಶ್ರೇಣಿಯ ಸರಾಸರಿ ಎತ್ತರ 762 ಮೀ. ಇದರ ಅತ್ಯುನ್ನತ ಶಿಖರ ಕಾಸೀಯಸ್ಕೋ (2,234 ಮೀ). ಪಶ್ಚಿಮದ ಬಯಲು ಸಮುದ್ರಮಟ್ಟಕ್ಕೆ 305 ಮೀ ಎತ್ತರವಾಗಿದೆ. ಇದು 2/3ರಷ್ಟು ಭಾಗವನ್ನೊಳಗೊಂಡಿದೆ. ರಾಜ್ಯದ ಕೆಲವು ನದಿಗಳು ಗ್ರೇಟ್ ಡಿವೈಡಿಂಗ್ ರೇಂಜ್‍ನಿಂದ ಪೂರ್ವಾಭಿಮುಖವಾಗಿ ಹರಿದು ಪೆಸಿಫಿಕ್ ಸಾಗರವನ್ನು ಸೇರುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಗಳು ನ್ಯಾಮಾಯ್, ಮಕ್ವಾರೀ, ಲಾಕ್ಲನ್ ಮತ್ತು ಮರಂಬಿಜೀ. ಇವು ಮರೀ ಮತ್ತು ಡಾರ್ಲಿಂಗ್ ನದಿಗಳನ್ನು ಕೂಡಿಕೊಳ್ಳುತ್ತವೆ. ಕ್ವೀನ್ಸ್ ಲೆಂಡಿನಲ್ಲಿ ಹುಟ್ಟುವ ಡಾರ್ಲಿಂಗ್ ನದಿ ಈ ರಾಜ್ಯದಲ್ಲಿ ನೈಋತ್ಯದ ಕಡೆಗೆ ಹರಿದು ಮರೀ ನದಿಯನ್ನು ಸೇರುತ್ತದೆ. ಮರೀ ನದಿ ವಿಕ್ಟೋರಿಯ ರಾಜ್ಯದಲ್ಲಿ ಹುಟ್ಟಿ, ನ್ಯೂ ಸೌತ್ ವೇಲ್ಸಿನ ದಕ್ಷಿಣದ ಅಂಚಿನಲ್ಲಿ ಸಾಗಿ ದಕ್ಷಿಣ ಆಸ್ಟ್ರೇಲಿಯಕ್ಕೆ ಹರಿದು ಹಿಂದೂ ಸಾಗರವನ್ನು ಸೇರುತ್ತದೆ.

	ವಾಯುಗುಣ :  ಇಲ್ಲಿಯದು ಶುಷ್ಕ ವಾಯುಗುಣ.  ರಾಜ್ಯದಲ್ಲಿ ಪ್ರಕಾಶಮಾನವಾದ ಬಿಸಿಲು ಇರುತ್ತದೆ. ಕೃಷಿಗೆ ಈ ವಾಯುಗುಣ ಅನುಕೂಲವಾಗಿಲ್ಲ. ಆದರೆ ಕರಾವಳಿಯ ನಗರಗಳು ಆಹ್ಲಾದಕರವಾಗಿದೆ. ಬೇಸಗೆಯಾಗಲಿ, ಚಳಿಗಾಲವಾಗಲಿ ತೀವ್ರವಾಗಿರುವುದಿಲ್ಲ. ಒಳನಾಡಿನಲ್ಲಿ ಬೇಸಗೆಯಲ್ಲಿ ಹೆಚ್ಚು ಸೆಕೆ. ಚಳಿಗಾಲದಲ್ಲಿ ಚಳಿ ತೀವ್ರ. ಸರಾಸರಿ ಉಷ್ಣತೆ ಬೇಸಗೆಯಲ್ಲಿ 24ಲಿ ಸೆ.-29ಲಿ ಸೆ. ಚಳಿಗಾಲದಲ್ಲಿ 7ಲಿ ಸೆ.-13ಲಿ ಸೆ. ಬೇಸಗೆಯಲ್ಲಿ ಉಷ್ಣತೆ 38ಲಿ ಸೆ.ವರೆಗೂ ಏರುವುದುಂಟು. ಚಳಿಗಾಲದಲ್ಲಿ ಮಂಜುಬೀಳುವುದುಂಟು. ರಾಜ್ಯದ ಸೇ.19ರಷ್ಟು ಪ್ರದೇಶದಲ್ಲಿ 254 ಮಿಮೀ ಗಿಂತ ಕಡಿಮೆ ಮಳೆಯಾಗುತ್ತದೆ. ಸೇ.23ರಷ್ಟು ಪ್ರದೇಶದಲ್ಲಿ 254-381 ಮಿಮೀ. ಮಳೆ ಆಗುತ್ತದೆ. ಕರಾವಳಿಯಲ್ಲಿ ಹೆಚ್ಚು ಮಳೆ. ಅಲ್ಲಿಯ ಉತ್ತರ ಭಾಗದಲ್ಲಿ ವರ್ಷಕ್ಕೆ 762 ಮಿಮೀ. ಮತ್ತು ದಕ್ಷಿಣದಲ್ಲಿ 1905 ಮಿಮೀ ಮಳೆಯಾಗುತ್ತದೆ. ಕರಾವಳಿಯಿಂದ ಒಳನಾಡಿಗೆ ಸಾಗಿದಂತೆ ಮಳೆ ಕಡಿಮೆಯಾಗುತ್ತದೆ; ಕೇವಲ 203 ಮಿಮೀ ಮಳೆಯಾಗುತ್ತದೆ. 

	ಸಸ್ಯಪ್ರಾಣಿ ಜೀವನ : ರಾಜ್ಯದ 1/10 ಭಾಗ ಅರಣ್ಯ. ಕಡಲ ತೀರದ ಬೆಟ್ಟದ ಸಾಲಿನಲ್ಲೂ ಉನ್ನತ ಪ್ರದೇಶದಲ್ಲೂ ಕಾಡುಗಳಿವೆ. ಕರಾವಳಿಯ ಉತ್ತರ ಭಾಗದಲ್ಲಿಯ ದಟ್ಟವಾದ ಉಪೋಷ್ಣವಲಯ ಅರಣ್ಯದಿಂದ ಪಶ್ಚಿಮದ ಬಯಲಿನಲ್ಲಿಯ ವಿರಳವಾದ ಸಸ್ಯಗಳ ವರೆಗೆ ನೈಸರ್ಗಿಕ ಸಸ್ಯ ಸಂಪತ್ತು ವ್ಯತ್ಯಾಸವಾಗುತ್ತದೆ. ಹೆಚ್ಚು ಭಾಗ ಪೊದೆ ಮತ್ತು ಕುರುಚಲುಗಳಿಂದ ಕೂಡಿದೆ. ಪ್ರಮುಖ ಮರ ನೀಲಗಿರಿ. ಉತ್ತರ ಕರಾವಳಿಯಲ್ಲಿ ಕೆಂಪು ಸಿಡಾರ್,  ಹೂಪ್‍ಪೈನ್, ಬೀಟೆ ಮುಂತಾದ ಮೃದು ಮರಗಳಿವೆ. ಪಶ್ಚಿ ಇಳಿಜಾರುಗಳಲ್ಲಿ ತುರಾಯಿ ತೈಲಪರ್ನಿ ಬೆಳೆಯುತ್ತದೆ. ಪಶ್ಚಿಮದ ಕೊನೆ ಬಿಟ್ಟರೆ ಉಳಿದಲ್ಲೆಲ್ಲ ಸ್ಥಳೀಯ ಹುಲ್ಲು ಬೆಳೆಯುತ್ತದೆ.

	ಅರಣ್ಯಗಳಲ್ಲಿ ವಿವಿಧ ಬಗೆಯ ಗಿಳಿಗಳು, ಕೊಕ್ಯಾಟು, ಎಮ್ಯು, ಟರ್ಕಿ ಕೋಳಿ ಇವೆ. ಸ್ಥನಿಗಳಲ್ಲಿ ಪ್ರಧಾನವಾದವು ವಾಂಬಾಟ್, ಕೋವಲ, ಒಪಾಸಂ, ಕಾಂಗರು. ಇಲ್ಲಿ ಅನೇಕ ಬಗೆಯ ವಿಷ ಸರ್ಪಗಳಿವೆ. ಪಶ್ಚಿಮದ ನದಿಗಳಲ್ಲಿ ಮೀನುಗಳು ಹೇರಳವಾಗಿ ಉಂಟು. 

	ಜನ:  ನ್ಯೂ ಸೌತ್‍ವೇಲ್ಸ್  ಜನ ಆಸ್ಟ್ರೇಲಿಯಾದ ಇತರ ಭಾಗಗಳ ಜನರನ್ನೇ ಹೋಲುತ್ತಾರೆ. ಇಲ್ಲಿಯ ಜನರಲ್ಲಿ ಸೇ. 80ರಷ್ಟು ಮಂದಿ ಇಂಗ್ಲೆಂಡಿನಿಂದಲೂ, ಸೇ.20 ರಷ್ಟು ಮಂದಿ ಐರ್ಲೆಂಡಿನಿಂದಲೂ ಬಂದವರ ವಂಶದವರು. ಉಳಿದವರ ಪೂರ್ವಜರು ಯೂರೋಪಿಯನ್ನರು. ಇಲ್ಲಿರುವ ಮೂಲವಾಸಿಗಳ ಸಂಖ್ಯೆ ಸು. 24,000. ಚೀನಿಯರೂ ಇಲ್ಲಿ ವಾಸವಾಗಿದ್ದಾರೆ. ರಾಜ್ಯದ ಜನ ಸಾಂದ್ರತೆ ಚದರ ಕಿಮೀ 587. ಒಟ್ಟು ಜನಸಂಖ್ಯೆಯಲ್ಲಿ 3/4 ಭಾಗದಷ್ಟು  ಜನ ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ ಕೇವಲ 2ರಷ್ಟು ಇರುವ ನ್ಯೂ ಕ್ಯಾಸೆಲ್, ಸಿಡ್ನಿ ಮತ್ತು  ವೂಲಂಗಾಂಗ್‍ಗಳಲ್ಲಿ ಕಿಕ್ಕಿರಿದಿದ್ದಾರೆ.

	ಸೇ.88ರಷ್ಟು ಮಂದಿ ಕ್ರೈಸ್ತರು. ಇವರಲ್ಲಿ ಆಂಗ್ಲೀಕನರೂ ರೋಮನ್ ಕ್ಯಾತೋಲಿಕರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಸರ್ಕಾರದ ವ್ಯವಹಾರ ಭಾಷೆ ಇಂಗ್ಲೀಷ್.

	ಹೆಚ್ಚು ಜನಸಂಖ್ಯೆಯ ಪಟ್ಟಣಗಳು ಇವು : ಸಿಡ್ನಿ (ಆಡಳಿತ ಕೇಂದ್ರ), ನ್ಯೂ ಕ್ಯಾಸೆಲ್, ವೂಲಂಗಾಂಗ್, ಬ್ರೋಕನ್ ಹಿಲ್, ವಾಗವಾಗ, ಆಲ್ಬರಿ, ಟಾಮ್ ವರ್ತ್, ಆರೆಂಜ್, ಗೋಲ್‍ಬರ್ನ್, ಸೆಸನಾಕ್ ಮತ್ತು ಬ್ಲೂ ಮೌಂಟನ್.

	ಇತಿಹಾಸ : ಕ್ಯಾಪ್ಟನ್ ಜೇಮ್ಸ್ ಕುಕ್ ಆಸ್ಟ್ರೇಲಿಯಾದ ಪೂರ್ವ ತೀರವನ್ನು ಕಂಡದ್ದು 1770ರಲ್ಲಿ. ಆಗ ನ್ಯೂ ಸೌತ್ ವೇಲ್ಸ್ ಎಂಬ ಹೆಸರನ್ನು ಆಸ್ಟ್ರೇಲಿಯಾದ ಇಡೀ ಪೂರ್ವತೀರಕ್ಕೆ ಅನ್ವಯಿಸಲಾಗಿತ್ತು. ಇಂಗ್ಲೆಂಡಿನ ವಲಸೆಗಾರರು ಮೊದಲು ನೆಲೆ ನಿಂತದ್ದು ಈ ತೀರದ ಬಾಟ್ನಿಬೇ ಕೊಲ್ಲಿಯ ಭಾಗದಲ್ಲಿ (1788). ಈ ವಸಾಹತನ್ನು ತರುವಾಯ ಜಾಕ್ಸನ್ ಬಂದರಿಗೆ (ಈಗಿನ ಸಿಡ್ನಿ) ವರ್ಗಾಯಿಸಲಾಯಿತು. 

	19ನೆಯ ಶತಮಾನದ ಕೊನೆಯ ಹೊತ್ತಿಗೆ ಟಾಸ್ಮೇನಿಯಾ ದ್ವೀಪವೂ ಸೇರಿ ಇಡೀ ಆಸ್ಟ್ರೇಲಿಯ ಬ್ರಿಟಿಷರ ವಶವಾಯಿತು. 1901ರ ಜನವರಿ 1 ರಂದು ನ್ಯೂ ಸೌತ್ ವೇಲ್ಸ್, ವಿಕ್ಟೋರಿಯ, ಕ್ವೀನ್ಸ್‍ಲೆಂಡ್, ದಕ್ಷಿಣ ಆಸ್ಟ್ರೇಲಿಯ, ಪಶ್ಚಿಮ ಆಸ್ಟ್ರೇಲಿಯ ಮತ್ತು ಟಾಸ್ಮೇನಿಯ-ಈ 6 ವಸಾಹತುಗಳು ರಾಜ್ಯಗಳಾಗಿ ಪರಿವರ್ತನೆಗೊಂಡು ಆಸ್ಟ್ರೇಲಿಯ ಕಾಮನ್‍ವೆಲ್ತ್‍ಗೆ ಸೇರಿದುವು. 1911ರಲ್ಲಿ ನ್ಯೂ ಸೌತ್‍ವೇಲ್ಸ್‍ಗೆ ಸೇರಿದ ಕ್ಯಾನ್ಬೆರ ಪ್ರದೇಶವನ್ನು ಆಸ್ಟ್ರೇಲಿಯದ ರಾಜಧಾನಿಯ ಆಡಳಿತ ಸ್ಥಾಪನೆಗಾಗಿ ಕಾಮನ್‍ವೆಲ್ತ್ ಸರ್ಕಾರ ಪಡೆದುಕೊಂಡಿತು. 

	ಆಡಳಿತ : ಬ್ರಿಟೀಷ್ ರಾಣಿಯಿಂದ ನೇಮಕವಾದ ನ್ಯೂ ಸೌತ್ ವೇಲ್ಸ್ ರಾಜ್ಯಕ್ಕೆ ಗವರ್ನರ್ ಇರುತ್ತಾನೆ. ರಾಜ್ಯದಲ್ಲಿ ವಿಧಾನಮಂಡಲದಲ್ಲಿ 2 ಸದನಗಳಿವೆ. ವಿಧಾನ ಪರಿಷತ್ತಿನ ಸದಸ್ಯರು 60. ಇವರ ಸದಸ್ಯಾವಧಿ 12 ವರ್ಷ. ಪ್ರತಿ 3 ವರ್ಷಕ್ಕೆ 15 ಮಂದಿ ಸರದಿಯಂತೆ ನಿವೃತ್ತರಾಗಿ, ಅವರ ಬದಲು 15 ಹೊಸ ಸದಸ್ಯರು ಚುನಾಯಿತರಾಗುತ್ತಾರೆ. ವಿಧಾನಸಭೆಯ ಸದಸ್ಯರು 99. 3 ವರ್ಷಗಳ ಅವಧಿಗೆ ಸಾರ್ವತ್ರಿಕ ವಯಸ್ಕ ಮತದಾನದಿಂದ ಇವರ ಆಯ್ಕೆಯಾಗುತ್ತದೆ. ಮತದಾನದ ವಯಸ್ಸು 18.
 
ಪ್ರಧಾನಿಯ ನೇತೃತ್ವದಲ್ಲಿ ಮಂತ್ರಿ ಸಂಪುಟ ಇರುತ್ತದೆ. ಶಿಕ್ಷಣ, ಆರೋಗ್ಯ, ಕಾನೂನು, ಪೋಲೀಸ್, ಕೈಗಾರಿಕೆ, ರೈಲ್ವೆ ಮೊದಲಾದ ಒಳಾಡಳಿತ ವಿಚಾರಗಳಿಗೆ ರಾಜ್ಯದ ಆಡಳಿತಾಧಿಕಾರ ಪರಿಮಿತವಾಗಿದೆ. ಕಾಮನ್‍ವೆಲ್ತ್ ಸರ್ಕಾರ ರಕ್ಷಣೆ, ವಿದೇಶಾಂಗ ವ್ಯವಹಾರ, ವಲಸೆ, ಸುಂಕ, ಅಂಚೆ, ವಿಮಾನಸಾರಿಗೆ, ಸಾಗರ ಸಾರಿಗೆ, ಮುಂತಾದ ವಿಷಯಗಳನ್ನು ನಿರ್ವಹಿಸುತ್ತದೆ. 

ಪಟ್ಟಣಗಳಲ್ಲಿ ಪೌರಸಭೆಗಳ ಆಡಳಿತವಿದೆ. ಈ ಬಗ್ಗೆ ಸರ್ಕಾರ ಶಾಸನ ರಚಿಸಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿವೆ. ಪೌರಸಭೆಗಳಿಗೆ 3 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ.
ಇಲ್ಲಿ ಬ್ರಿಟೀಷ್ ಪದ್ಧತಿಯ ನ್ಯಾಯ ವ್ಯವಸ್ಥೆ ಇದೆ. ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಯಲ್ಲಿ ನ್ಯಾಯದರ್ಶಿಗಳಿರುತ್ತಾರೆ. ರಾಜ್ಯದ ಸರ್ವೋಚ್ಛನ್ಯಾಯಾಲಯದ ತೀರ್ಪಿನ ವಿರುದ್ಧ ಆಸ್ಟ್ರೇಲಿಯದ ಉಚ್ಛನ್ಯಾಯಾಲಯಕ್ಕೆ, ಕೆಲವು ಸಂದರ್ಭಗಳಲ್ಲಿ ಲಂಡನ್ನಿನ ಪ್ರಿವಿ ಕೌನ್ಸಿಲ್‍ಗೆ ಅಪೀಲ್ ಸಲ್ಲಿಸಬಹುದು. 

ಆರ್ಥಿಕತೆ : ನ್ಯೂ ಸೌತ್ ವೇಲ್ಸ್ ವ್ಯವಸಾಯ ಪ್ರಧಾನ ರಾಜ್ಯ. ಮುಖ್ಯ ಬೆಳೆಗಳು ಗೋದಿ, ಓಟ್ಸ್, ಮುಸುಕಿನ ಜೋಳ, ಬತ್ತ, ಆಲೂಗಡ್ಡೆ, ಕಬ್ಬು, ಹತ್ತಿ, ದ್ರಾಕ್ಷಿ, ಪಶುಪಾಲನೆ ಮತ್ತು ಹೈನುಗಾರಿಕೆಯೂ ಮುಖ್ಯವಾಗಿವೆ. ಆಸ್ಟ್ರೇಲಿಯದ ಒಟ್ಟು ಕುರಿಗಳ ಸಂಖ್ಯೆಯಲ್ಲಿ ಅರ್ಧ ಭಾಗವು ಪಶುಗಳ ಸಂಖ್ಯೆಯಲ್ಲಿ ಕಾಲುಭಾಗವು ಹಂದಿಗಳ ಪೈಕಿ ಐದನೆಯ ಒಂದು ಭಾಗವೂ ನ್ಯೂ ಸೌತ್‍ವೇಲ್ಸ್‍ನಲ್ಲಿದೆ.

ಅರಣ್ಯಗಳಲ್ಲಿಯ ಯೂಕಲಿಪ್ಟಸ್, ಸಿಡಾರ್, ತೈಲಪರ್ನಿ, ಕರಿಮರ ಇವುಗಳಿಂದ ರಾಜ್ಯಕ್ಕೆ ಆದಾಯ ಬರುತ್ತದೆ. ಪೆಸಿಫಿಕ್ ಸಾಗರ ತೀರದಲ್ಲಿ ಅಧಿಕವಾಗಿ ಮೀನುಹಿಡಿಯಲಾಗುತ್ತದೆ. 

ಸಿಡ್ನಿ ನಗರದಲ್ಲಿ ಭಾರಿ ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಮೀನು, ಮಾಂಸ, ಹಾಲು, ಹಣ್ಣು, ಬೆಣ್ಣೆ ಮುಂತಾದವುಗಳ ಡಬ್ಬೀಕರಣ, ಬಟ್ಟೆ, ಸಿಗರೇಟು, ಚುಟ್ಟಾ, ಬಣ್ಣ ಕಾಗದ ಮುಂತಾದವುಗಳ ತಯಾರಿಕೆ ಇವು ಮುಖ್ಯ ಕೈಗಾರಿಕೆಗಳು. ರಾಜ್ಯದಲ್ಲಿ ನ್ಯೂ ಕ್ಯಾಸ್‍ಲ್‍ನ ಉತ್ತರದ ಹಂಟರ್ ಕಣಿವೆ, ವೂಲಂಗಾಂಗ್ ಹಾಗೂ ಲಿತ್‍ಗೌ ಪ್ರದೇಶಗಳಲ್ಲಿ ಕಲ್ಲಿದ್ದಲ ಗಣಿಗಳಿವೆ. ಬ್ರೋಕನ್ ಹಿಲ್‍ನ ಸುತ್ತಮುತ್ತ ಬೆಳ್ಳಿ, ಸೀಸ ಹಾಗೂ ತವರದ ಗಣಿಗಳೂ ಕೋಬರ್ ಬಳಿ ತಾಮ್ರದ ಗಣಿಯೂ ಇವೆ.

ಸಾರಿಗೆ : 1974ರಲ್ಲಿ 2,10,128 ಕಿಮೀ. ರಸ್ತೆಗಳಿದ್ದುವು. ಇದರಲ್ಲಿ ರಾಜ್ಯ ಹೆದ್ದಾರಿಗಳ ಉದ್ದ 35,856 ಕಿಮೀ ರಾಜ್ಯದಲ್ಲಿ 9,600 ಕಿಮೀ ರೈಲು ಮಾರ್ಗಗಳಿವೆ. ಸಿಡ್ನಿಯಿಂದ ಇತರ ಪಟ್ಟಣಗಳಿಗೆ ರೈಲುಮಾರ್ಗಗಳುಂಟು. ಸಿಡ್ನಿಯಲ್ಲಿ ವಿವಿಧ ಬಡಾವಣೆಗಳಿಗೆ ಸುರಂಗ ರೈಲುಮಾರ್ಗಗಳ ಜಾಲ ನಿರ್ಮಿಸಲಾಗಿದೆ. ಸಿಡ್ನಿ ದೊಡ್ಡ ರೈಲ್ವೆ ಜಂಕ್ಷನ್, ರೈಲುಮಾರ್ಗಗಳು ತೀರಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ, ಒಳನಾಡಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸಾಗಿವೆ. ಸಿಡ್ನಿ-ಬ್ರೋಕನ್ ಹಿಲ್ ರೈಲು ಮಾರ್ಗದ ಉದ್ದ 1,120 ಕಿಮೀ. ನ್ಯೂ ಸೌತ್ ವೇಲ್ಸ್‍ನ 4 ಭಾರಿ ಬಂದರುಗಳು ಸಿಡ್ನಿ, ನ್ಯೂಕ್ಯಾಸ್‍ಲ್, ಪೋರ್ಟ್‍ಕೆಂಬ್ಲ ಮತ್ತು ಬಾಟನಿ ಬೇ. ಸಿಡ್ನಿಯ ಪೋರ್ಟ್ ಜ್ಯಾಕ್‍ಸನ್ ಪ್ರಪಂಚದ ಅತ್ಯುತ್ತಮ ರೇವುಗಳಲ್ಲೊಂದು. ವಿಮಾನಗಳ ಹಾರಾಟ ಪ್ರಧಾನವಾಗಿ ಪ್ರಯಾಣಿಕರನ್ನು ಸಾಗಿಸುವುದಕ್ಕೆ, ಸಿಡ್ನಿಯಿಂದ ಅನೇಕ ಕಡೆಗಳಿಗೆ ವಿಮಾನ ಸಂಚಾರವುಂಟು. ಸಿಡ್ನಿ ವಿಮಾನ ನಿಲ್ದಾಣದಲ್ಲಿ ಜೆಟ್ ವಿಮಾನಗಳು ಇಳಿಯಲು ಸೌಲಭ್ಯಗಳಿವೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ